ಪಾರ್ಕ್, ಮಂಗೋ
1771-1806. ಸ್ಕಾಟಿಷ್ ಆಫ್ರ್ರಿಕನ್ ಪರಿಶೋಧಕ; ವ್ಯಾಪಾರ ನೌಕೆಯಲ್ಲಿ ಶಸ್ತ್ರವೈದ್ಯನಾಗಿದ್ದವ (1792). ಸ್ಕಾಟ್ಲೆಂಡಿನ ಸೆಲ್ಕರ್ಕಿನಲ್ಲಿ ಹುಟ್ಟಿ ಎಡಿನ್‍ಬರೊ ವಿಶ್ವವಿದ್ಯಾಲಯದಲ್ಲಿ ಶಸ್ತ್ರವೈದ್ಯ ಶಿಕ್ಷಣ ಪಡೆದ. ಸಸ್ಯ ವಿಜ್ಞಾನದಲ್ಲೂ ನಿಪುಣನೆಂದು ಹೆಸರು ಪಡೆದು ಆಫ್ರಿಕನ್ ಪರಿಶೋಧನ ಸಂಸ್ಥೆಯ ಸದಸ್ಯನಾದ. ಗ್ಯಾಂಬಿಯ ನದಿಯ ಮೇಲೆ ಸಾಗಿ, ಸೆನೆಗಲ್ಲನ್ನು ದಾಟಿ, 1795 gಲ್ಲಿ ನೈಜರ್ ನದಿಯ ಹರಿವನ್ನು ಕಂಡುಹಿಡಿಯಲು ಹೊರಟ. ಪ್ರವಾಹವನ್ನೇ ಅನುಸರಿಸಿ ಅದೇ ದಿಕ್ಕಿನಲ್ಲೇ 480 ಕಿ.ಮೀ. ಸಾಗಿದ. ಅರಬರ ಕೈಗೆ ಸಿಕ್ಕಿ ನಾಲ್ಕು ತಿಂಗಳ ಕಾಲ ಸೆರೆಯಲ್ಲಿದ್ದು ಅಲ್ಲಿಂದ ತಪ್ಪಿಸಿಕೊಂಡ. 19 ತಿಂಗಳುಗಳ ಕಾಲ ಒಳನಾಡಿನಲ್ಲಿ ಸುತ್ತಾಡಿ 1799 ರಲ್ಲಿ ಇಂಗ್ಲೆಂಡನ್ನು ತಲಪಿದ. ಅದೇ ವóರ್ಷ ಇವನ ಟ್ರಾವೆಲ್ಸ್ ಇನ್ ದಿ ಇಂಟೀರಿಯರ್ ಡಿಸ್ಟ್ರಿಕ್ಟ್ಸ್ ಆಫ್ ಆಫ್ರಿಕ ಎಂಬ ಪುಸ್ತಕ ಹೊರಬಂತು. 

1805 ರಲ್ಲಿ ಎರಡನೆಯ ಸಲ ಇವನು ದೊಡ್ಡ ತಂಡದೊಂದಿಗೆ ನೈಜರ್ ಪ್ರವಾಸ ಕೈಗೊಂಡು ಪಶ್ಚಿಮ ಆಫ್ರಿಕಾದ ಮಾಲಿಯಲ್ಲಿರುವ ಬಾಮಕೋವನ್ನು ತಲಪುವ ವೇಳೆಗೆ ಇವನ ತಂಡದಲ್ಲಿ ಎಂಟು ಜನರು ಮಾತ್ರ ಬದುಕಿದ್ದರು. ಇವನು ಎದೆಗುಂದದೆ ಜೊತೆಗಾರರೊಂದಿಗೆ ಮುನ್ನಡೆದ. ಬುಸ್ಸಾ ಎಂಬಲ್ಲಿ ನದಿ ರಭಸವಾಗಿ ಹರಿಯುವ ಎಡೆಯಲ್ಲಿ ಸ್ಥಳೀಯ ಜನರು ಇವನ ದೋಣಿಯ ಮೇಲೆ ಎರಗಿದರು. ಪಾರ್ಕ್ ನದಿಯಲ್ಲಿ ಮುಳುಗಿ ಪ್ರಾಣ ನೀಗಿದ.
(ಆರ್.ಆರ್.ಎ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ